ನಿಜಲಿಂಗಾರಾಧ್ಯ
	ಸು. 1800. ವೀರಶೈವ ಕವಿ; ಶತಕಕಾರ. ಈತನ ಕೃತಿ ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿರುವ 100 ಪದ್ಯಗಳ ನಿಜಲಿಂಗ ಶತಕ. ಈತನನ್ನು ತುಂಗಭದ್ರತೀರದಲ್ಲಿರುವ ಖಾದ್ರಿಪುರದವನೆಂದು ಕವಿಚರಿತೆಕಾರರು ಹೇಳುವುದು ಸರಿಯಲ್ಲವೆಂದೂ ತಮಗೆ ದೊರೆತ ಎಲ್ಲ ಹಸ್ತಪ್ರತಿಗಳಲ್ಲೂ ತುಂಗಭದ್ರಾ ತೀರದೊಳೆಸೆವ ಕುದ್ರುಪುರನಿವಾಸ ನಿಜಲಿಂಗಭವಭಂಗ ಶರಣಜನವರದ ಜಯತು-ಎಂದಿರುವುದರಿಂದ, ಈತ ತುಂಗಭದ್ರಾತೀರಕ್ಕೆ ಸಮೀಪವಾಗಿರುವ ಹಾವನೂರು, ಗುತ್ತಲ ಗ್ರಾಮಗಳಿಗೆ ಸೇರಿದವನಿರಬೇಕೆಂದೂ ಸುಂಕಾಪುರ ಅವರು ಅಭಿಪ್ರಾಯಪಟ್ಟಿದ್ದಾರೆ. ಶತಕದ ಪ್ರತಿಪದ್ಯದ ಅಂತ್ಯವೂ ನಿಜಲಿಂಗ ಭವಭಂಗ ಶರಣ ಜನವರದ ಜಯತು ಎಂದು ಕೊನೆಗೊಳ್ಳುತ್ತದೆ. ಹಲವು ಪ್ರತಿಗಳಲ್ಲಿ ನಿಜಲಿಂಗಭವ ಭಂಗ, ಶರಣಜನವರದ ಭಕ್ತಿಸಂಗ, ನಿಜಲಿಂಗಭವಭಂಗ ಶರಣುಜನವರದ ದೇವ-ಎಂದಿದೆ.

	ಕನ್ನಡದ ಎಲ್ಲ ಶತಕಕಾರರಂತೆ ಈತನೂ ಭಕ್ತಿಜ್ಞಾನವೈರಾಗ್ಯಗಳನ್ನು ಬೋಧಿಸುತ್ತ ನೀತಿಯನ್ನು ಹೇಳಿದ್ದಾನೆ. ಶಿವಸ್ತುತಿ ಈ ಶತಕದ ಬಹುಭಾಗವನ್ನೇ ಆಕ್ರಮಿಸಿದೆ. ದೇವರ ದೇವನಾದ ನಿಜಲಿಂಗನ ಕೃಪೆಯಿದ್ದವನಿಗೆ ಏತರ ಕೊರತೆಯೂ ಆಗಲಾರದೆಂಬ ಭರವಸೆ ಬಹುತೇಕ ಎಲ್ಲ ಪದ್ಯಗಳಲ್ಲೂ ಬಂದಿದೆ.

	ಜಾಣಪದ್ಧತಿ, ಮೂರ್ಖಪದ್ಧತಿಗಳೆರಡನ್ನೂ ಕವಿ ಬಹು ಸರಸವಾಗಿ ಹೇಳಿದ್ದಾನೆ. ಈ ಎರಡೂ ಪದ್ಧತಿಗಳ ವಿಷಯನಿರೂಪಣೆಯಲ್ಲಿ ಕವಿಯ ಆಳವಾದ ಲೋಕಾನುಭವ ಅಡಗಿದೆ. ನೀತಿಯ ಜೊತೆಜೊತೆಗೆ ಕವಿ ಮುಂದಿನ ಪದ್ಯಗಳಲ್ಲಿ ನಿಷ್ಠುರವಾದ ಸಮಾಜ ವಿಡಂಬನೆಯನ್ನೂ ಮಾಡಿದ್ದಾನೆ. ಎಂಬತ್ತುನಾಲ್ಕು ಲಕ್ಷ ಯೋನಿಗಳಲ್ಲಿ ತೊಳತೊಳಲಿ ಬಂದ ಮಾನುಷ ಜನ್ಮವು ಸಕಲರಲ್ಲೂ ಅಧಿಕ. ಆದರೆ ಸಂಸಾರವೋ ಚಾಡಿಕೋರರು, ಚೋರುಗಳು, ಸಿರಿವಂತರಡಿ ನೋಡಿ ಬಳಲುವ ದುರಾಚಾರಿಗಳು, ಪಾಪಿಗಳು, ದುರ್ಜನರು, ದಯಾಹೀನರು, ಕೂಡಿ ನಡೆವಲ್ಲಿ ಭೇದವನ್ನಿಕ್ಕುವವರು, ಪೆರರ್ಗೆ ಕೇಡೆಣಿಸುವವರು, ಕುಟಿಲರು, ಕುಹಕಿಗಳು-ಮುಂತಾದವರಿಂದ ತುಂಬಿ ಹೋಗಿದೆ. ಇಂಥವರ ಮಧ್ಯದಲ್ಲಿ ಹೇಗೆ ಜೀವಿಸಬೇಕೆಂದು ಕವಿ ತನ್ನ ಇಷ್ಟದೈವದ ಮೊರೆಹೋಗುತ್ತಾನೆ.

	ಒಟ್ಟಿನಲ್ಲಿ ಕನ್ನಡದಲ್ಲಿ ಜನಪ್ರಿಯವಾದ ಪಂಪಾಶತಕ, ರಕ್ಷಾಶತಕ, ಅಪರಾಜಿತೇಶ್ವರಶತಕ, ರತ್ನಾಕರಾಧೀಶ್ವರಶತಕ, ಸೋಮೇಶ್ವರ ಶತಕ-ಇವೇ ಮುಂತಾದವುಗಳ ಸಾಲಿಗೆ ಇದೂ ಸೇರುತ್ತದೆ.
(ಎಲ್.ವಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ